ಮಧುಮೇಹದ ಬಗ್ಗೆ ಕಿರು ಮಾಹಿತಿ
 
 
 

ನಿಮ್ಮ ಆರೋಗ್ಯವೇ ನಮ್ಮ ಸ್ಫೂರ್ತಿ

 
 
 
 

ಮಧುಮೇಹದ ಬಗ್ಗೆ ಕಿರು ಮಾಹಿತಿ

 

ಪೀಠಿಕೆ

 

ನಿಮಗೆ ಮಧುಮೇಹ (ಡಯಬಟಿಸ್ ಮಿಲಿಟಸ್) ಇದೆಯೆಂದು ಒಂದು ವೇಳೆ ಕಂಡುಬಂದಿದ್ದಲ್ಲಿ, ಈಗ ನಿಮ್ಮ ಮನಸ್ಸಿನಲ್ಲಿ ಸಾಕಷ್ಟು ಪ್ರಶ್ನೆಗಳು, ಅನುಮಾನಗಳು ಮತ್ತು ಕೊಂಚ ಅನಿಶ್ಚಿತತೆಯೂ ಇರಬಹುದೆಂದು ಖಚಿತವಾಗಿ ಹೇಳಬಹುದು.  ಮಧುಮೇಹವುಳ್ಳ ಹಚ್ಚಿನ ವ್ಯಕ್ತಿಗಳು ಆರೋಗ್ಯವಂತವಾದ ಹಾಗೂ ಸಂಪೂರ್ಣವಾದ ಜೀವನವನ್ನು ನಡೆಸುವರು. ನೀವೀಗ ಮಾಡಬಹುದಾದ ಅತ್ಯುತ್ತಮ ಕೆಲಸವೇನೆಂದರೆ ಮಧುಮೇಹದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವುದು. ಈ ಲೇಖನದಲ್ಲಿ ನಾವು ಮಧುಮೇಹದ ಬಗ್ಗೆ ಕೆಲವು ಪ್ರಾಥಮಿಕ ಮಾಹಿತಿಯನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತೇವೆ.

 

ಮಧುಮೇಹ ಎಂದರೇನು?

ಮಧುಮೇಹ ನಿಮ್ಮ ರಕ್ತದಲ್ಲಿ ಗ್ಲೂಕೋಸ್, ಅಥವಾ ಸಕ್ಕರೆ ಮಟ್ಟ ತುಂಬಾ ಅಧಿಕವಾಗಿರುವ ಒಂದು ಕಾಯಿಲೆ. ವ್ಯಕ್ತಿಯ ಶರೀರ ಸಾಕಷ್ಟು ಇನ್ಸುಲಿನ್ ಹಾರ್ಮೋನ್ ಉತ್ಪಾದಿಸದಿದ್ದರೆ ಅಥವಾ ದೇಹವು ಇನ್ಸುಲಿನ್-ಗೆ ಸರಿಯಾಗಿ  ಪ್ರತಿಕ್ರಿಯೆ ನೀಡದಿದ್ದಲ್ಲಿ ಮಧುಮೇಹ ಉಂಟಾಗುತ್ತದೆ. ಮಧುಮೇಹದಲ್ಲಿ ಎರಡು ಸಾಮಾನ್ಯ ವಿಧಗಳಿವೆ. ಮಧುಮೇಹ 1ನೆಯ ವಿಧದಲ್ಲಿ ಮೇದೋಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದಿಸುವಲ್ಲಿ ವಿಫಲವಾಗುತ್ತದೆ. ಮಧುಮೇಹ 2ನೆಯ ವಿಧದಲ್ಲಿ ದೇಹವು ಇನ್ಸುಲಿನ್-ಗೆ ಸರಿಯಾಗಿ  ಪ್ರತಿಕ್ರಿಯೆ ನೀಡುವುದಿಯಲ್ಲ, ತದನಂತರ  ಮೇದೋಜೀರಕ ಗ್ರಂಥಿಗೆ ದೇಹಕ್ಕೆ ಅವಶ್ಯವಾದ ಅಧಿಕ ಪ್ರಮಾಣದ ಇನ್ಸುಲಿನ್ ಉತ್ಪಾದಿಸಲು ಸಾಧ್ಯವಾಗದಿದ್ದಾಗ ರಕ್ತದಲ್ಲಿ ಸಕ್ಕರೆಯು ಅಧಿಕವಾಗುತ್ತದೆ. ಮಧುಮೆಹಿಗಳ ಪೈಕಿ ಹೆಚ್ಚಿನವರಿಗೆ 2ನೆಯ ವಿಧದ ಮಧುಮೇಹವಿರುತ್ತದೆ.

 

1ನೆಯ ವಿಧದ ಮಧುಮೇಹ ಎಂದರೇನು?

1ನೆಯ ವಿಧದ ಮಧುಮೇಹವನ್ನು ಇನ್ಸುಲಿನ್ ಅವಲಂಬಿತ ಮಧುಮೇಹ ಎಂದು ಕೂಡ ಕರೆಯುತ್ತಾರೆ. ಮಧುಮೇಹ ಬಾಧಿತ ಜನರ ಪೈಕಿ ಸುಮಾರು 10% ಈ ಪ್ರಕಾರವನ್ನು ಹೊಂದಿರುತ್ತಾರೆ. ಇದನ್ನು ಸಾಮಾನ್ಯವಾಗಿ ಜ್ಯುವೆನಿಲ್ ಮಧುಮೇಹ ಕರೆಯುತ್ತಾರೆ ಏಕೆಂದರೆ ಮಕ್ಕಳು ಮತ್ತು ಹದಿಹರೆಯದವರಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ, ಆದರೆ ಕೆಲವೊಮ್ಮೆ, 40 ವರ್ಷಗಳ ವರೆಗಿನ ವಯೋಮಾನದ ಕೆಲವು ವಯಸ್ಕರಲ್ಲಿ ಸಹ ಇದು ಕಾಣಿಸಿಕೊಳ್ಳಬಹುದು.

 

2ನೆಯ ವಿಧದ ಮಧುಮೇಹ ಎಂದರೇನು?

ಮಧುಮೇಹ 2 ನೆಯ ವಿಧ ಸಾಮಾನ್ಯವಾಗಿ ವಯಸ್ಕರಲ್ಲಿ  ಮತ್ತು ಮುಖ್ಯವಾಗಿ ಅಧಿಕತೂಕದ ವ್ಯಕ್ತಿಗಳಲ್ಲಿ ಉಂಟಾಗುತ್ತದೆ. ಶರೀರದ ಜೀವಕೋಶಗಳು ಇನ್ಸುಲಿನ್-ಗೆ ಸರಿಯಾಗಿ ಪ್ರತಿಕ್ರಿಯಿಸದಂತಹ ಸ್ಥಿತಿಯಲ್ಲಿ ಹೆಚ್ಚಿದ ಇನ್ಸುಲಿನ್ ಅವಶ್ಯಕತೆ ನಿಭಾಯಿಸಲು ಮೇದೋಜೀರಕ ಗ್ರಂಥಿ ವಿಫಲವಾದರೆ ಇದು ಉಂಟಾಗುತ್ತದೆ.

 

ಮಕ್ಕಳಲ್ಲಿ ಮಧುಮೇಹ 2ನೆಯ ವಿಧ ಕಂದುಬರಬಹುದೇ?

ಹೌದು. ಹಿಂದೆ, ವೈದ್ಯರು ಕೇವಲ ವಯಸ್ಕರಿಗೆ ಮಾತ್ರ 2ನೆಯ ವಿಧದ ಮಧುಮೇಹದ ಅಪಾಯವಿದೆ ಎಂದು ಭಾವಿಸಿದ್ದರು. ಆದರೆ, ಪ್ರಪಂಚದಾದ್ಯಂತ ಮಕ್ಕಳಲ್ಲಿ ಹೆಚ್ಚು ಹೆಚ್ಚಿನ ಸಂಖ್ಯೆಯಲ್ಲಿ ಈಗ ಮಧುಮೇಹ 2ನೆಯ ವಿಧದ ರೋಗನಿರ್ಣಯ ಮಾಡಲಾಗುತ್ತದೆ. ಈ ಹೆಚ್ಚಳವು ಬಹುಶಃ  ಮಕ್ಕಳಲ್ಲಿ  ಆಧುನಿಕ ಜೀವನಶೈಲಿಯ ಭಾಗವಾದ ಹೆಚ್ಚು-ತೂಕ ಅಥವಾ ಸ್ಥೂಲಕಾಯ ಮತ್ತು ಕಡಿಮೆ ದೈಹಿಕ ಸಕ್ರಿಯತೆ ಇವುಗಳು ಹೆಚ್ಚಾಗಿರುವುದರಿಂದ ಉಂಟಾಗುತ್ತಿರಬಹುದು.

 

ಪ್ರಿ-ಡಯಾಬಿಟಿಸ್ ಎಂದರೇನು?

ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವು  ಸಾಮಾನ್ಯಕ್ಕಿಂತ ಹೆಚ್ಚು ಆದರೆ ಮಧುಮೇಹ ಎಂದು ನಿರ್ಣಯಿಸುವ ಮಟ್ಟಕಿಂತ ಕಡಿಮೆ ಇದ್ದಾಗ ನಿಮಗೆ ಪ್ರಿ-ಡಯಾಬಿಟಿಸ್ ಇದೆ ಎಂದು ಹೇಳಬಹುದು. ಪ್ರಿ-ಡಯಾಬಿಟಿಸ್ ಉಳ್ಳವರ ಸಂಖೆ ದಿನೇ-ದಿನೇ ಹೆಚ್ಚುತ್ತಲಿದೆ. ಇದು 2ನೆಯ ವಿಧದ ಮಧುಮೇಹ ಉಂಟಾಗುವ ಸಾಧ್ಯತೆಯನ್ನು ಮಹತ್ತರವಾಗಿ ಹೆಚ್ಚಿಸುತ್ತದೆ.

ಒಳ್ಳೆಯ ಸುದ್ದಿಯೇನೆಂದರೆ ನೀವು ಪ್ರಿ-ಡಯಾಬಿಟಿಸ್ ಮಧುಮೇಹವಾಗಿ ಪರಿವರ್ತನೆಗೊಳ್ಳುವುದನ್ನು ತಡೆಯಬಹುದು ಇಲ್ಲವೇ ನಿಧಾನಗೊಳಿಸಬಹುದು. ಆರೋಗ್ಯಕಾರ ಆಹಾರ ಪದ್ಧತಿ, ತೂಕವನ್ನು ಸರಿಯಾದ ಮಟ್ಟದಲ್ಲಿರಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮುಂತಾದ ಜೀವನ ಶೈಲಿ ಬದಲಾವಣೆಯಿಂದ ಇದು ಸಾಧ್ಯ.

 

ಮಧುಮೇಹದೊಂದಿಗೆ ನಾನು ಸಾಮಾನ್ಯವಾದ ಜೀವನ ನಡೆಸಬಹುದೇ?

ಖಂಡಿತವಾಗಿಯೂ, ನೀವು ಒಂದು ಸಾಮಾನ್ಯ ಜೀವನ ನಡೆಸಬಹುದು. ನೀವು ನಿಮ್ಮ ಮಧುಮೇಹ ಮತ್ತು ಸಂಭಂದಿತ ತೊಂದರೆಗಳಾದ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸಲು ಬೇಕಾದ ಕ್ರಮಗಳನ್ನು ಕೈಗೊಂಡರೆ ನೀವು ಆರೋಗ್ಯವನ್ನು ಕಾಯ್ದುಕೊಳ್ಳಬಹುದು.

 

ರೋಗಲಕ್ಷಣಗಳು

ಮಧುಮೇಹದ ರೋಗಲಕ್ಷಣಗಳೇನು?

ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆರಂಭಿಕ ಹಂತಗಳಲ್ಲಿ, ಯಾವುದೇ ರೋಗಲಕ್ಷಣಗಳು ಇರದಿರಬಹುದು, ಆದ್ದರಿಂದ ನಿಮಗೆ ಮಧುಮೇಹ ಇದೆ ಎಂದು ತಿಳಿಯದೇ ಇರಬಹುದು.  ನಿಮಗರಿವಿಲ್ಲದೇ ಯಾವುದೇ ರೋಗಲಕ್ಷಣವಿಲ್ಲದೇ ಕಣ್ಣು, ಮೂತ್ರಪಿಂಡಗಳು, ಹೃದಯ ಮತ್ತು ರಕ್ತನಾಳಗಳಿಗೆ ಹಾನಿಯುಂಟಾಗುತ್ತಿರಬಹುದು.  ಮಧುಮೇಹದ ಕೆಲ ಲಕ್ಷಣಗಳು ಈ ತೆರನಾಗಿವೆ:

 

  • ಅತಿಯಾದ ಹಸಿವು

  • ಅತಿ ಬಾಯಾರಿಕೆ

  • ಪದೇ ಪದೇ ಮೂತ್ರ ವಿಸರ್ಜನೆ

  • ವಿವರಿಸಲಾಗದ ತೂಕ ನಷ್ಟ

  • ದೃಷ್ಟಿ ಮಸುಕಾಗುವಿಕೆ.

  • ಯಾವಗಲೂ ಸುಸ್ತಾಗಿರುವ ಅನುಭವ.

  • ಗಾಯಗಳು ಗುಣವಾಗದಿರುವುದು.

  • ಶುಷ್ಕ ಚರ್ಮ ಹಾಗೂ ಚರ್ಮದಲ್ಲಿ ತುರಿಕೆ.

  • ಕೈ ಅಥವಾ ಕಾಲುಗಳ ಅಡಿಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ.

  • ಪುನರಾವರ್ತಿಸುವ ಸೋಂಕುಗಳು (ಚರ್ಮ, ಹಲ್ಲುಗಳ ವಸಡು, ಮೂತ್ರಕೋಶ), ಯೋನಿಯ ಈಸ್ಟ್ ಸೋಂಕು

ಮಧುಮೇಹದ ರೋಗಲಕ್ಷಣ

ಮಧುಮೇಹ 2ನೆಯ ವಿಧ  ಇರುವವರಲ್ಲಿ ಇನ್ಸುಲಿನ್ ಪ್ರತಿರೋಧ ಲಕ್ಷಣಗಳನ್ನು ನೋಡಬಹುದು: ಕುತ್ತಿಗೆಯ ಸುತ್ತ ಅಥವಾ ಚರ್ಮದ ವರ್ಣ ದಟ್ಟವಾಗುವುದು, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟರಾಲ್, ಹದಿಹರೆಯದ ಹುಡುಗಿಯರಲ್ಲಿ ಹಾಗೂ ಮಹಿಳೆಯರಲ್ಲಿ ಋತುಚಕ್ರದ ಏರುಪೇರು  ಇತ್ಯಾದಿ.

 ಚಿಕಿತ್ಸೆ ತೆಗೆದುಕೊಳ್ಳದಿದ್ದ ಪಕ್ಷದಲ್ಲಿ ನಿಮ್ಮ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ತೀರಾ ಅಧಿಕವಾದರೆ, ಕೀಟೋಅಸಿಡೋಸಿಸ್ ಎಂಬ ತೊಂದರೆಯು ಉಂಟಾಗಬಹುದು. ಹೀಗೆ ಆದಲ್ಲಿ ನಿಮಗೆ ಉಸಿರಾಟದ ತೊಂದರೆ, ಹೊಟ್ಟೆಯಲ್ಲಿ  ನೋವು, ವಾಂತಿ, ಬಾಯಿ ಒಣಗುವುದು, ಶರೀರದಲ್ಲಿ ನೀರಿನ ಕೊರತೆ ಮತ್ತು ಕೋಮಾ ಹಾಗೂ ಚಿಕಿತ್ಸೆ ನೀಡದಿದ್ದರೆ ಸಾವೂ ಸಂಭವಿಸಬಹುದು. 

 

  • ನೆನಪಿಡಿ : ಪ್ರಾಥಮಿಕ ಹಂತಗಳಲ್ಲಿ, ಹಲವಾರು ವರ್ಷ ರೋಗಿಗೆ ಮಧುಮೇಹದ ಯಾವುದೇ ಲಕ್ಷಣಗಳು ಇಲ್ಲದಿರಬಹುದು!

 

ಮಧುಮೇಹದ ಕಾರಣಗಳು ಮತ್ತು ಅಪಾಯಕಾರಿ ಗುಣಾಂಶಗಳು (ರಿಸ್ಕ್ ಫ್ಯಾಕ್ಟರ್ಸ್)

ಮಧುಮೇಹಕ್ಕೆ ಕಾರಣವೇನು?

ಮೇದೋಜೀರಕ ಗ್ರಂಥಿ

ಮೇದೋಜೀರಕ ಗ್ರಂಥಿ

ಹೊಟ್ಟೆ ಕೆಳಗೆ ಇರುವ ಮೇದೋಜೀರಕ ಗ್ರಂಥಿ ಇನ್ಸುಲಿನ್ ಎಂಬ ಹಾರ್ಮೋನ್ ಉತ್ಪಾದಿಸುತ್ತದೆ. ಈ ಹಾರ್ಮೋನು ಆಹಾರ ಸೇವನೆ ನಂತರ ಅಂಗಾಂಶಗಳಲ್ಲಿ ಸಕ್ಕರೆಯ ಶೇಖರಣೆಯನ್ನು ನಿರ್ದೇಶಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸುತ್ತದೆ. ದೇಹದಲ್ಲಿ ಇನ್ಸುಲಿನ್ ಕೊರತೆ ಅಥವಾ ಅದರ ಕ್ರಿಯೆಗೆ ಪ್ರತಿರೋಧವು ಮಧುಮೇಹಕ್ಕೆ ಕಾರಣವಾಗುತ್ತದೆ. ಸಕ್ಕರೆಯು ರಕ್ತನಾಳಗಳಿಂದ (ಹೆದ್ದಾರಿ) ನಿರ್ಗಮಿಸಿ ಅಂಗಾಂಶಗಳ(ನಗರಗಳ) ಒಳ ಸೇರಲು "ಟ್ರಾಫಿಕ್ ಜಾಮ್" ಆದಂಥಹಾ ಒಂದು ಸ್ಥಿತಿ ಎಂದು ಉಪಮೆಯನ್ನು ಕೊಡಬಹುದು. ಗ್ಲುಕೋಸ್ ನಮ್ಮ ಶರೀರದಲ್ಲಿ ಶಕ್ತಿಯ ಅವಶ್ಯಕ ಮೂಲ ಆದರೂ ಇದು ಒಂದು ವಿಷದಂತೆ. ಆದುದರಿಂದ ನಮ್ಮ ಶರೀರವು ಇದರ ಮಟ್ಟವನ್ನು ಸುರಕ್ಷಿತವಾಗಿ ಸಾಧ್ಯವಿದ್ದಸ್ಟೂ ಕಡಿಮೆ ಮಟ್ಟದಲ್ಲಿಡುತ್ತದೆ. ಮಧುಮೇಹದಲ್ಲಿ ರಕ್ತದಲ್ಲಿ ಹೆಚ್ಚು ಗ್ಲುಕೋಸ್ ರಕ್ತನಾಳಗಳು, ನರಗಳು, ಹೃದಯ, ಕಣ್ಣು ಮತ್ತು ಮೂತ್ರಪಿಂಡಗಳಿಗೆ ಹಾನಿ ಮಾಡಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

 

ಮಧುಮೇಹ ಬರುವ ಅಪಾಯ ಯಾರಿಗಿದೆ? ನನಗೆ ಅಪಾಯ ಉಂಟೇ? ನಾನು ಅದರ ಬಗ್ಗೆ ಏನು ಮಾಡಬಹುದು?

ಮಧುಮೇಹ ಸಾಮಾನ್ಯವಾಗಿ ಮಧುಮೇಹ ಹೊಂದಿರುವ ಸಂಬಂಧಿಕರುಳ್ಳ ಜನರಿಗೆ, ದೈಹಿಕ ವ್ಯಾಯಾಮ ಇಲ್ಲದೆ ಇರುವವರಲ್ಲಿ, ಅನಾರೋಗ್ಯಕರ ಆಹಾರ ಪದ್ಧತಿ ಅನುಸರಿಸುವವರಲ್ಲಿ, ಅತಿಯಾದ ತೂಕ, ಅಧಿಕ ರಕ್ತದೊತ್ತಡ (BP), ವೃದ್ಧಾಪ್ಯ, ಗರ್ಭಾವಸ್ಥೆಯಲ್ಲಿ ಮಧುಮೇಹ ಕಂಡುಬಂದ ತಾಯಂದಿರಲ್ಲಿ ಕಂಡುಬರುತ್ತದೆ. ನಿಮ್ಮ ಮಧುಮೇಹದ ಅಪಾಯದ ಮಟ್ಟದ ಬಗ್ಗೆ ನಿಮ್ಮ ವೈದ್ಯರಲ್ಲಿ ಸಮಾಲೋಚಿಸಿ. ನಿಮ್ಮ ಅಪಾಯದ ಮಟ್ಟವನ್ನು ಗುರುತರವಾಗಿ ಕಡಿಮೆ ಮಾಡಲು ನೀವು ಕೆಲವಾದರೂ ಬದಲಾವಣೆಯನ್ನು ಮಾಡಬಹುದು.


ಅಪಾಯದ ಗುಣಾಂಶಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡುವಿರಾ?

ವಯಸ್ಸು

ಮಧುಮೇಹದ ಅಪಾಯ ವಯಸ್ಸಿನೊಂದಿಗೆ ಹೆಚ್ಚುತ್ತದೆ - ವಿಶೇಷವಾಗಿ 45 ವರ್ಷಗಳ ನಂತರ. ನೀವು ನಿಮ್ಮ ವಯಸ್ಸನ್ನು ಬದಲಿಸಲಿಕ್ಕಾಗದಿದ್ದರೂ, ನಿಮ್ಮ ಇತರ ಅಪಾಯಕಾರಿ  ಗುಣಾಂಶಗಳ ಬಗ್ಗೆ ಗಮನ ಹರಿಸಿ ನಿಮ್ಮ ಅಪಾಯವನ್ನು ಕಡಿಮೆಗೊಳಿಸಬಹುದು.

 

ವಂಶದ / ಜನಾಂಗೀಯ ಹಿನ್ನೆಲೆ

ಭಾರತೀಯರು ಮಧುಮೇಹದ ಹೆಚ್ಚಿನ ಅಪಾಯವುಳ್ಳ ಜನಾಂಗದವರಿದ್ದಾರೆ. ಅದು ಹೀಗೇಕೆ ಎಂದು ನಮಗೆ ಇನ್ನೂ ನಿಖರವಾಗಿ ತಿಳಿದಿಲ್ಲ. ನೀವು ನಿಮ್ಮ ಜನಾಂಗೀಯ ಹಿನ್ನೆಲೆಯನ್ನು ಬದಲಿಸಲಿಕ್ಕಾಗದಿದ್ದರೂ, ಖಂಡಿತವಾಗಿಯೂ ನಿಮ್ಮ ಇತರ ಅಪಾಯಕಾರಿ  ಗುಣಾಂಶಗಳ ಬಗ್ಗೆ ಗಮನ ಹರಿಸಿ ಮಧುಮೇಹ ಬರದಂತೆ ತಡೆಗಟ್ಟಬಹುದು ಇಲ್ಲವೇ ಬರುವುದನ್ನು ತಡಮಾಡಬಹುದು.

 

ಕೌಟುಂಬಿಕ ಇತಿಹಾಸ

ನಿಮ್ಮ ಕೌಟುಂಬಿಕ ಇತಿಹಾಸವನ್ನು ಬದಲಿಸಲೀಕಾಗದಿದ್ದರೂ, ನಿಮ್ಮ ಕುಟುಂಬದಲ್ಲಿ ಮಧುಮೇಹವಿರುವವುದನ್ನು ನಿಮ್ಮ ವೈದ್ಯರಿಗೆ ತಿಳಿಸುವುದು ಅವಶ್ಯ. ನಿಮ್ಮ ತಂದೆ, ತಾಯಿ ಅಥವಾ ಒಡಹುಟ್ಟಿದವರಿಗೆ ಮಧುಮೇಹವಿದ್ದಲ್ಲಿ ನಿಮಗೂ ಮಧುಮೇಹ ಬರುವ ಸಾಧ್ಯತೆ ಅಧಿಕ. ನಿಮ್ಮ ತಂದೆತಾಯಿಗಳಿಬ್ಬರೂ ಅಥವಾ ನಿಮ್ಮ ಕುಟುಂಬದ ಅನೇಕ ವ್ಯಕ್ತಿಗಳು ಮಧೂಮೆಹಿಗಳಾಗಿದ್ದರೆ ಸಂಭಾವ್ಯತೆ ಇನ್ನೂ ಅಧಿಕವಾಗಿರುತ್ತದೆ.

 

ಆಹಾರ ಪದ್ಧತಿ

ನಾವು ಇದುವರೆಗೆ ನೋಡಿದವುಗಳಿಂತ ಇದು ಭಿನ್ನವಾದುದು ಏಕೆಂದರೆ ಇದನ್ನು ನೀವು ಬದಲಾಯಿಸಬಹುದು. ಕೊಬ್ಬು, ಕೊಲೆಸ್ಟ್ರಾಲ್, ಕ್ಯಾಲರಿಗಳು ಅಧಿಕವಾಗಿರುವ ಆಹಾರ ನಿಮಗೆ ಮಧುಮೇಹ ಬರುವ ಅಪಾಯವನ್ನು ಹೆಚ್ಚಿಸುವುದು. ನಾರು ಅಧಿಕವಾಗಿರುವ ಹಾಗೂ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕಡಿಮೆ ಇರುವ ಆಹಾರ ಸೇವಿಸುವುದರಿಂದ ನಿಮಗೆ ಮಧುಮೇಹ ಬರುವ ಅಪಾಯವನ್ನು ಕಡಿಮೆಗೊಳಿಸಬಹುದು. ನೀವು ಎಸ್ಟು ತಿನ್ನುತ್ತೀರಿ ಅನ್ನುವುದು ನೀವು ಏನನ್ನು ತಿನ್ನುತ್ತೀರಿ ಎಂಬಸ್ಟೇ ಮುಖ್ಯ. ನಿಮ್ಮ ಆಹಾರದ ಭಾಗ-ಗಾತ್ರದ (portion size) ಬಗ್ಗೆ ಗಮನವಿರಲಿ. ಹೊಟ್ಟೆ ತುಂಬುವಸ್ಟು ತಿನ್ನುವುದು ಒಳ್ಳೆಯ ಅಭ್ಯಾಸವಲ್ಲ.

 

ವ್ಯಾಯಾಮ

ನಿಯಮಿತವಾದ ವ್ಯಾಯಾಮ ಹಾಗೂ ಆರೋಗ್ಯಕರವಾದ ತೂಕವನ್ನು ಕಾಯ್ದುಕೊಂಡರೆ ನಿಮ್ಮ ಮಧುಮೇಹದ ಅಪಾಯವನ್ನು ಕಡಿಮೆಗೊಳಿಸಬಹುದು. ಅಲ್ಪ ವ್ಯಾಯಾಮವು ಯಾವುದೇ ವ್ಯಾಯಾಮವಿಲ್ಲದಿರುವ್ದಕ್ಕಿಂತ ಉತ್ತಮ, ಆದರೆ ನಮ್ಮ ಸಲಹೆಯ ಪ್ರಕಾರ ವಾರದಲ್ಲಿ ಕನಿಷ್ಠ ಐದು ದಿನಗಳಾದರೂ ಡದಿನದಲ್ಲಿ 30-60 ನಿಮಿಷ ವ್ಯಾಯಾಮ ಮಾಡುವುದು ಅತ್ಯುತ್ತಮ. ನೀವು ಕೆಲ ಸಮಯದಿಂದ ವ್ಯಾಯಾಮ ಮಾಡದೇ ಇದ್ದಲ್ಲಿ ಅಥವಾ ನಿಮಗೆ ಹೃದಯ ಸಂಭಂಧಿ ಅಥವಾ ಇತರ ಆರೋಗ್ಯದ ತೊಂದರೆಗಳಿದ್ದಲ್ಲಿ, ವ್ಯಾಯಾಮ ಆರಂಭಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆಯಿರಿ.

 

ಗರ್ಭಾವಸ್ಥೆಯಲ್ಲಿ ಮಧುಮೇಹ

ಗರ್ಭಿಣಿಯಗಿದ್ದಾಗ ಮಧುಮೇಹ ಕಂಡುಬಂದಲ್ಲಿ ಅದನ್ನು ಜೆಸ್ಟೇಷನಲ್ ಡಿಯಾಬೆಟಿಸ್ ಎಂದು ಹಕರತಯುವರು. ಸಾಮನ್ಯವಾಗಿ ಪ್ರಸವದ ನಂತರ ಇದು ಸರಿಯಾಗುತ್ತಾದರೂ ಶೇ. 40% ರಿಂದ 60% ಮಹಿಳೆಯರಲ್ಲಿ 15 ವರ್ಷಗಳೊಳಗೆ ಮಧುಮೇಹವು ಮರುಕಳಿಸುವುದು.

ಗರ್ಭಿಣಿಯಗಿದ್ದಾಗ ಮಧುಮೇಹವಿಲ್ಲದಿದ್ದರೂ ಜನಿಸಿದ ಮಗುವಿನ ತೂಕ 3.5 kg ಗಿಂತ ಹೆಚ್ಚಾಗಿದ್ದಲ್ಲಿ ತಾಯಿಗೆ ಮುಂದೆ ಮಧುಮೇಹ ಬರುವ ಸಾಧ್ಯತೆ ಅಧಿಕ.

 

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOD)

ಮಹಿಳೆಯ ಶರೀರದಲ್ಲಿ ಹಾರ್ಮೋನ್-ಗಳ ಏರುಪೇರಿನಿಂದ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಉಂಟಾಗುತ್ತದೆ. ಇದು ಅಂಡಾಶಯದಲ್ಲಿ ಸಿಸ್ಟ ಉಂಟಾಗುವುದಕ್ಕೆ ಕಾರಣವಾಗುತ್ತದೆ ಹಾಗೂ ಮುಖದಲ್ಲಿ ಕೂದಲು ಬೆಳೆಯುವುದು ಇತ್ಯಾದಿ ತೊಂದರೆ ಉಂಟಾಗಬಹುದು. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಇರುವ ಮಹಿಳೆಯರಿಗೆ ೨ನೇಯ ವಿಧದ ಮಧುಮೇಹ ಬರುವ ಸಾಧ್ಯತೆ ಹೆಚ್ಚು.

 

ರೋಗ ನಿರ್ಣಯ (Diagnosis)

 

ಮಧುಮೇಹವನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚುವುದು, ಚಿಕಿತ್ಸೆ ಪಡೆಯುವುದು ಹಾಗೂ ತಡೆಗಟ್ಟುವುದು ಮುಖ್ಯವೇ?

ಹೌದು, ಯಾಕೆಂದರೆ ಚಿಕಿತ್ಸೆ ಇಲ್ಲದೇ ಮಧುಮೇಹವು ಇನ್ನೂ ಉಲ್ಬಣಗೊಳ್ಳುವುದು. ಇದು ಅನೇಕ ಆರೋಗ್ಯ ಸಂಭಂದಿತ ಗಂಭೀರ ತೊಂದರೆಗಳಿಗೆ ಕಾರಣವಾಗಬಹುದು:

 

  • ಕಣ್ಣಿನ ಹಾನಿಯು ಕುರುಡುತನಕ್ಕೆ ಕಾರಣವಾಗಬಹುದು

  • ಮೂತ್ರಪಿಂಡಗಳ ವೈಫಲ್ಯ

  • ನರಗಳ ಮತ್ತು ರಕ್ತನಾಳಗಳ ಹಾನಿಯು ಕಾಲ್ಬೆರಳುಗಳನ್ನು ಅಥವಾ ಕಾಲಿನ ನಷ್ಟಕ್ಕೆ ಕಾರಣವಾಗಬಹುದು

  • ಹೃದಯಾಘಾತ

  • ಸ್ಟ್ರೋಕ್ ಮತ್ತು ಪಾರ್ಶ್ವವಾಯು

  • ಪುರುಷರಲ್ಲಿ ಲೈಂಗಿಕ ಶಕ್ತಿಹೀನತೆ.

  • ಒಸಡುಗಳ ತೊಂದರೆಗಳು ಹಲ್ಲಿನ ನಷ್ಟಕ್ಕೂ ಕಾರಣವಾಗಬಹುದು

ನಿಮ್ಮ ಶರೀರವನ್ನು ಅಧಿಕ ಸಕ್ಕರೆಗೆ ಎಸ್ಟು ಹೆಚ್ಚು ಸಮಯ ಒಡ್ಡಿಕೊಳ್ಳುತ್ತೀರೋ ಅಷ್ಟು ಹೆಚ್ಚು ತೊಂದರೆಗಳು ಉಂಟಾಗುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಶಿಫಾರಸು ಮಾಡಿದ ಮೌಲ್ಯಕ್ಕೆ ಅತಿ ಹತ್ತಿರದಲ್ಲಿ ಕಾಯ್ದುಕೊಳ್ಳುವುದರಿಂದ ನೀವು ಮಧುಮೇಹದಿಂದಾಗುವ ತೊಂದರೆಗಳನ್ನು ಕಡಿಮೆಗೊಳಿಸಬಹುದು, ವಿಳಂಬಿಸಬಹುದು, ಅಥವಾ ಕೆಲ ಸಂಧಾರ್ಭದಲ್ಲಿ ಸಂಪೂರ್ಣವಾಗಿ ತಡೆಗಟ್ಟಬಹುದು. ಪ್ರಸಿದ್ಧ ಅಧ್ಯಯನಗಳು ಮಧುಮೇಹದ ಮೊದಲಿನ ದಿನಗಳಲ್ಲಿ ಉತ್ತಮ ನಿಯಂತ್ರಣ ಭವಿಷ್ಯದ ತೊಂದರೆಗಳನ್ನು ತಡೆಗಟ್ಟುವಲ್ಲಿ ಗುರುತರ ಪಾತ್ರವಹಿಸಬಹುದು ಎಂದು ತೋರಿಸಿವೆ. ಇದನ್ನು ಬ್ಯಾಂಕಿನಲ್ಲಿ ಮಾಡುವ ದೀರ್ಘಾವಧಿಯ ಬಂಡವಾಳಕ್ಕೆ ಹೋಲಿಸಿ. ಇದನ್ನು ಬೇಗ ಪ್ರಾರಂಭಿಸಿದಷ್ಟೂ ಹೆಚ್ಚು ಉತ್ತಮ! 

 

ನನಗೆ ಮಧುಮೇಹವಿದೆಯೇ ಎಂದು ಹೇಗೆ ತಿಳಿದುಕೊಳ್ಳಬಹುದು?

ಮಧುಮೇಹ ತಪಾಸಿಸಲು, ನಿಮ್ಮ ವೈದ್ಯರು ಕೆಳಗಿನ ಪರೀಕ್ಷೆಗಳಲ್ಲಿ ಯಾವುದನ್ನಾದರೂ ಮಾಡಿಸಬಹುದು:

ನಿರಾಹಾರವಿದ್ದಾಗ ರಕ್ತದಲ್ಲಿನ ಸಕ್ಕರೆಯ ಪರೀಕ್ಷೆ: ಇದು 8 ಗಂಟೆಗಳ ಒಂದು ರಾತ್ರಿಯ ಉಪವಾಸದ ನಂತರ ಸಾಮಾನ್ಯವಾಗಿ ಮಾಡಲಾಗುತ್ತದೆ. ನಿಮ್ಮ ರಕ್ತದ ಸಕ್ಕರೆ ಒಂದು ವೇಳೆ ≥ 126 mg / dL ಇದ್ದಲ್ಲಿ, ಪರೀಕ್ಷೆಯನ್ನು ಖಚಿತಪಡಿಸಲು ಪುನರಾವರ್ತನೆ ಮಾಡಬಹುದು. ಎರಡು ಅಥವಾ ಹೆಚ್ಚಿನ ಸಂದರ್ಭಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು 126 deciliter (mg / dL) ಗಿಂತ ಹೆಚ್ಚಾಗಿದ್ದಲ್ಲಿ ನಿಮಗೆ ಮಧುಮೇಹ ಇದೆ ಎಂದು ತಿಳಿಯತಕ್ಕದ್ದು.

ರಕ್ತದಲ್ಲಿ ಸಕ್ಕರೆ ಮಟ್ಟವು 100 mg/dL ನಿಂದ  125 mg/dL ಮಧ್ಯೆ ಇದ್ದಲ್ಲಿ ಪ್ರಿ-ಡಯಾಬೇಟಿಸ್ ಎಂದು ಕರಯುವರು

ಓರಲ್ ಗ್ಲೂಕೋಸ್ ಟಾಲೆರೆನ್ಸ್ ಟೆಸ್ಟ್:  ಈ ಪರೀಕ್ಷೆಯಲ್ಲಿ, ಮುಂಜಾನೆ ಖಾಲಿ ಹೊಟ್ಟೆಯಲ್ಲಿ ನಿಮಗೆ 75 ಗ್ರಾಂ ಗ್ಲುಕೋಸ್  ಕರಗಿರುವ ನೀರನ್ನು ಕುಡಿಯಲು ಕೊಡಲಾಗುತ್ತದೆ.  ನಂತರ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಮಿತ ಅಂತರಗಳಲ್ಲಿ ಅಳೆಯಲಾಗುತ್ತದೆ. ರಕ್ತದಲ್ಲಿ ಸಕ್ಕರೆ 200 mg / dL ಅಥವಾ ಅದಕ್ಕೂ ಹೆಚ್ಚು ಮಟ್ಟಕ್ಕೇರಿದರೆ  ನೀವು ಮಧುಮೇಹದ ಹೊಂದಿದ್ದೀರಿ ಎಂದು ತಿಳಿಯಬಹುದು.

HbA1C ಪರೀಕ್ಷೆ:  ಈ ಪರೀಕ್ಷೆಯನ್ನು ದಿನದ ಯಾವುದೇ ಸಮಯದಲ್ಲಿ ಪಡೆದ ರಕ್ತದ ಮಾದರಿಯಿಂದ ಮಾಡಬಹುದು.  ಖಾಲಿ ಹೊಟ್ಟೆಯಲ್ಲಿರುವ ಅವಶ್ಯಕತೆ ಇರುವುದಿಲ್ಲ.  HbA1C  ಮೌಲ್ಯ > 6.5% ಇದ್ದ ವೇಳೆ ನೀವು ಮೇಲೆ ತಿಳಿಸಲಾದ ಯಾವುದಾದರೂ ರೋಗಲಕ್ಷಣಗಳನ್ನು ಹೊಂದಿದ್ದರೆ ಇದು ಮಧುಮೇಹವನ್ನು ಸೂಚಿಸುತ್ತದೆ. ಇಲ್ಲದಿದ್ದರೆ ನಿಮ್ಮ ವೈದ್ಯರು ಮಧುಮೇಹವನ್ನು ಖಚಿತಪಡಿಸಲು ಮತ್ತೆ ಪರೀಕ್ಷಿಸಲು ಹೇಳಬಹುದು.

ರಾಂಡಮ್ ರಕ್ತ ಸಕ್ಕರೆಯ ಪರೀಕ್ಷೆ: ಇದನ್ನು ಸಾಮಾನ್ಯವಾಗಿ ಮಾಡಲಾಗುವುದಿಲ್ಲ. ಆದರೂ ಇದು ಒಂದು ವೇಳೆ >200mg/dL ಅಧಿಕ ಇದ್ದು ಜೊತೆಯಲ್ಲಿ ಮಧುಮೇಹದ ಯಾವುದೇ ರೋಗಲಕ್ಷಣಗಳಿದ್ದರೆ (ವಿಪರೀತ ಬಾಯಾರಿಕೆ, ಮೂತ್ರ ವಿಸರ್ಜನೆ, ವಿವರಿಸಲಾಗದ ತೂಕದ ನಷ್ಟ ಇತ್ಯಾದಿ) ಮಧುಮೇಹ ಇದೆಯಂದು ತಿಳಿಯಬೇಕು. ಈ ತರಹದ ಯಾವುದೇ ರೋಗಲಕ್ಷಣಗಳು ಇಲ್ಲದ ವೇಳೆ ನಿಮ್ಮ ವೈದ್ಯರು ಇತರೆ ಪ್ರಮಾಣಿತ ಪರೀಕ್ಷೆಗಳಲ್ಲಿ ಒಂದನ್ನು ಮಾಡಿಸಲು ಸೂಚಿಸಬಹುದು.

 

ಫಾಸ್ಟಿಂಗ್ ಪ್ಲಾಸ್ಮಾ ಗ್ಲೂಕೋಸ್ ಮಧುಮೇಹ ರೋಗನಿರ್ಣಯ   ಗ್ಲುಕೋಸ್ ಟಾಲರೆನ್ಸ್ ಪರೀಕ್ಷೆ  ಮಧುಮೇಹ ರೋಗನಿರ್ಣಯ
 ಖಾಲಿ ಹೊಟ್ಟೆಯ ಪ್ಲಾಸ್ಮಾ ಸಕ್ಕರೆ
(FPG)
   ಗ್ಲುಕೋಸ್ ಟಾಲರೆನ್ಸ್ ಪರೀಕ್ಷೆ
(OGTT)

 

 

 

ಎಂಡೋಕ್ರೈನಾಲಜಿ ಬಗ್ಗೆ ಮಾಹಿತಿ

 
 
 
Sweet Clinic

 

Dr. Gururaja Rao
Sweet Clinic
Ground Floor, Cauvery Buliding,
Besides Arogya Polyclinic
Opp. Sanjeevini Clinic
Near Unity Hospital
Falnir Road
Mangalore
Karnataka, India

Timings: 8AM - 1PM & 3.30PM - 7.30PM.
2/4th Fridays and Sundays* Holiday
Consultations with prior Appointments
Appointments: +91-9481353667

Next Sunday SPECIAL OPD : To be Announced